ಕ್ರೀಟಾನ್ 	

ಬಹು ಒತ್ತಾದ ಹಾಗೂ ಬಿಗಿಯಾದ ನೇಯ್ಗೆಯ ಮತ್ತು ಮುದ್ರಿತವಾದ ಹತ್ತಿ, ಲಿನನ್ ಅಥವಾ ಕೃತಕ ರೇಷ್ಮೆ ವಸ್ತ್ರ. ಇದನ್ನು ಪರದೆಗಳಿಗೂ ಪೀಠೋಪಕರಣಗಳಿಗೂ ವಸ್ತ್ರವಾಗಿ ಉಪಯೋಗಿಸುತ್ತಾರೆ. ಭಾರತದಲ್ಲಿ ಕ್ರೀಟಾನುಗಳನ್ನು ಸಾದಾ ಅಥವಾ 2/2ರ ಮೂಲೆ ನೇಯ್ಗೆಯಿಂದ ನೇಯ್ದಿರುತ್ತಾರೆ. ಸ್ಯಾಟಿನ್ ಮತ್ತು ಓಟ್ ಮೀಲ್ ನೇಯ್ಗೆಗಳನ್ನು ಕೆಲವು ಸಮಯದಲ್ಲಿ ಉಪಯೋಗಿಸುತ್ತಾರೆ. ಎರಡು ಕಡೆಯೂ ಮುದ್ರಿತವಾದುದನ್ನು ಓಟ್‍ಮೀಲ್ ನೇಯ್ಗೆ ಎಂದು ಕರೆಯುವುದುಂಟು. ಇದು ಪರದೆಗಳಿಗೆ ಬಹುಸೂಕ್ತವಾದದ್ದು. ಈ ಬಟ್ಟೆ ದ್ವಿಮುಖಿ ವಸ್ತ್ರ (ರಿವರ್ಸಿಬಲ್). ಇದನ್ನು 30ನೆಯ ದಾರದ ಅಂಗುಲಕ್ಕೆ 48 ಹಾಸು ಎಳೆಗಳಿಂದಲೂ 8ನೆಯ ದಾರದ ಅಂಗುಲಕ್ಕೆ 32 ಹೊಕ್ಕು ಎಳೆಗಳಿಂದಲೂ ನೇಯುತ್ತಾರೆ. ಸಾದಾ ನೇಯ್ಗೆಯ ಹಾಗೂ ಮುದ್ರಿತ ಹಾಸುದಾರವುಳ್ಳ ಮತ್ತು ಒರಟಾದ ಹೊಕ್ಕುದಾರವುಳ್ಳ ವಸ್ತ್ರಗಳು ಈ ವಿಧಾನದಲ್ಲಿ ಬಹು ಪ್ರಖ್ಯಾತವಾಗಿವೆ. ಬಟ್ಟೆಯ ಎರಡು ಮುಖಗಳಲ್ಲೂ ವೈವಿಧ್ಯ ತೋರುವುದರಿಂದ ಇವು ದ್ವಿಮುಖಿವಸ್ತ್ರಗಳೆನಿಸಿವೆ. ಇವನ್ನು ಛಾಯಾ ರೂಪಿತ ಪರದೆ ಎಂದೂ ಕರೆಯುತ್ತಾರೆ.		(ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ